ಹೃಷಿಕೇಶ
	ಭಾರತದ ಉತ್ತರಾಂಚಲ್ ರಾಜ್ಯದ ಒಂದು ಪವಿತ್ರಯಾತ್ರಾಸ್ಥಳ. ಹಿಮಾಲಯ ತಪ್ಪಲಿನಲ್ಲಿ ಸಮುದ್ರಮಟ್ಟದಿಂದ ಸು. 356 ಮೀ ಎತ್ತರದಲ್ಲಿರುವ ಈ ಸ್ಥಳ ಸು. 2.59 ಚ.ಕಿ.ಮೀ. ವಿಸ್ತೀರ್ಣವನ್ನೊಂದಿದೆ. ಜನಸಂಖ್ಯೆ 59,671. ಈ ಕ್ಷೇತ್ರದ ಮೂರು ಕಡೆಯಲ್ಲೂ ಹಿಮಾಲಯ ಪರ್ವತ ಶ್ರೇಣಿ ಆವರಿಸಿದೆ. ಹೃಷಿಕೇಶ ಚಂದ್ರಭಾಗ ಉಪನದಿ ಗಂಗಾನದಿಯನ್ನು ಸೇರುವ ಸ್ಥಳದಲ್ಲಿ ಗಂಗಾನದಿಯ ಬಲದಂಡೆಯ ಮೇಲಿದೆ. ದೆಹಲಿಯಿಂದ ಈಶಾನ್ಯಕ್ಕೆ ಸು. 328 ಕಿಮೀ ದೂರದಲ್ಲಿದೆ. ಪ್ರಸಿದ್ಧ ಹರಿದ್ವಾರ ಕ್ಷೇತ್ರಕ್ಕೆ ಕೇವಲ 24 ಕಿಮೀ. ಇಲ್ಲಿಯ ಮಂದಿ ಹಿಂದಿ, ಗರ್ವಾಲಿ ಮತ್ತು ಆಂಗ್ಲ ಭಾಷೆ ಬಳಸುತ್ತಾರೆ. 

	ಹೃಷಿಕೇಶದ ವಾಯುಗುಣ ಬಹುತಂಪು. ಬೇಸಿಗೆಯಲ್ಲಿ ಗರಿಷ್ಠ ಉಷ್ಣಾಂಶ 44.4º ಸೆ ಮತ್ತು ಕನಿಷ್ಠ 29º ಸೆ ಇರುತ್ತದೆ. ಕೆಲವು ತಿಂಗಳುಗಳಲ್ಲಿ ಉಷ್ಣತೆಯು 0º ಸೆ ಗಿಂತಲೂ ಕಡಿಮೆ ಇರುವುದುಂಟು. 
	ಹಿಂದೆ ರೈಭ್ಯಋಷಿ ಈ ಸ್ಥಳದಲ್ಲಿ ತಪಸ್ಸು ಮಾಡಿ ದೇವರಿಂದ ವರವನ್ನು ಪಡೆದನಾದ್ದರಿಂದ ಇದನ್ನೆ ಹೃಷಿಕೇಶವಾಯಿತೆಂದು ಪ್ರತೀತಿ. ಇಲ್ಲಿನ ಲಕ್ಷ್ಮಣ ಝಾಲ ನದಿಯ ದಂಡೆಗಳ ಮೇಲೆ ಮುನಿ-ಕಿ-ರೇತಿ ಅಥವಾ ಸಾಧುಸಂತರ ಶಾಂತಿಧಾಮವಿದ್ದು ಯೋಗಿಗಳು ಧ್ಯಾನದಲ್ಲಿ ಮಗ್ನರಾಗಿರುವುದನ್ನು ಕಾಣಬಹುದು. ಲಕ್ಷ್ಮಣಝಾಲ ನದಿ ದಂಡೆಯ ಹೃಷಿಕೇಶ ಪಟ್ಟಣ ಯಾತ್ರಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಅಭಿವೃದ್ಧಿಯಾ ಗಿದೆ. ಇಲ್ಲಿನ ಗಂಗಾನದಿಯಲ್ಲಿ ಸ್ನಾನ ಮಾಡಿದರೆ ಪಾಪಕರ್ಮಗಳು ಇಲ್ಲವಾಗುತ್ತವೆ ಎಂಬ ನಂಬಿಕೆಯಿಂದ ಪ್ರತಿ ವರ್ಷ ಲಕ್ಷಾಂತರ ಮಂದಿ ಯಾತ್ರಾರ್ಥಿಗಳು ಇಲ್ಲಿಗೆ ಬರುತ್ತಾರೆ. ಹಿಮಾಲಯದ ಮಡಿಲಲ್ಲಿರುವ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ಯಾತ್ರಾಸ್ಥಳಗಳಿಗೆ ಹೋಗಲು ಈ ಕ್ಷೇತ್ರ ಹೆಬ್ಬಾಗಿಲಿನಂತಿದ್ದು ಇದನ್ನು “ದೇವರುಗಳ ಹೆಬ್ಬಾಗಿಲು” ಎಂದೂ ಕರೆಯುವುದುಂಟು. ಈ ಕ್ಷೇತ್ರ ಸುತ್ತಲಿನ ಆಶ್ರಮಗಳಿಗೆ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಕೇಂದ್ರವಾಗಿದೆ. ಇಲ್ಲಿ ಧ್ಯಾನದ ಮೂಲಕ ಮತ್ತು ಆಯುರ್ವೇದೀಯ ಔಷಧಗಳ ಮೂಲಕ ಹಲವಾರು ವ್ಯಾಧಿಗಳಿಗೆ ಚಿಕಿತ್ಸೆ ನೀಡುವ ಕೇಂದ್ರಗಳಿವೆ. ಇತ್ತೀಚೆಗೆ ಇಲ್ಲಿ ಮನರಂಜನೆ ಮತ್ತು ಸಾಹಸಮಯ ಕ್ರೀಡಾಚಟುವಟಿಕೆ ಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಲು ಅಲಕಾನಂದ ಮತ್ತು ಬ್ರಹ್ಮಗಿರಿ ನದಿಗಳ ಬಿಳಿ ಹಾಸಿಗೆಯಂತಿರುವ ತಪ್ಪಲಿನಲ್ಲಿ ಹಲವಾರು ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 

	ಹೃಷಿಕೇಶದಿಂದ ಉತ್ತರಕ್ಕೆ 5 ಕಿಮೀ ಅಂತರದಲ್ಲಿರುವ ಲಕ್ಷ್ಮಣ ಝಾಲ ದಂಡೆಯಲ್ಲಿ ದ್ವಾಪರಯುಗದಲ್ಲಿ ರಾಮನ ಸಹೋದರ ಲಕ್ಷ್ಮಣ ತಪಸ್ಸಾನ್ನಾಚರಿಸಿದನೆಂದು ನಂಬಲಾಗಿದೆ. ಇಲ್ಲಿ ಲಕ್ಷ್ಮಣನ ದೇವಸ್ಥಾನ ವಿದೆ. ಈ ದೇವಾಲಯಕ್ಕೆ ಹೋಗಲು ತೂಗು ಸೇತುವೆಯನ್ನು ನಿರ್ಮಿಸಲಾಗಿತ್ತು, ಅನಂತರ ಸು.137ಮೀ ಉದ್ದವಿರುವ ಕಬ್ಬಿಣದ ಸೇತುವೆಯನ್ನು 1939ರಲ್ಲಿ ನಿರ್ಮಿಸಲಾಯಿತು. ಈ ಸೇತುವೆ ನಿರ್ಮಿಸಿರುವ ಸ್ಥಳದಲ್ಲಿ ಹಿಂದೆ ಲಕ್ಷ್ಮಣ ಗಂಗಾನದಿಯನ್ನು ಸೆಣಬಿನ ನಾರಿನ ಸಹಾಯದಿಂದ ದಾಟಿದನೆಂದು ಹೇಳುವರು. ಭರತನೂ ಇಲ್ಲಿ ತಪಸ್ಸು ಮಾಡಿದ್ದನಂತೆ. ಲಕ್ಷ್ಮಣ ಝಾಲ ನದಿ ಸೇತುವೆಗೆ ಹೊಂದಿಕೊಂಡಂತೆ ರಾಮ ಝಾಲ ಸೇತುವೆಯನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಮತ್ತು ಶಿವಾನಂದ ಆಶ್ರಮದ ನಡುವೆ ಇದೆ. ಇದು ಸ್ವರ್ಗಾಶ್ರಮ ನೀಲಕಂಠ ಮಹಾದೇವ ದೇವಸ್ಥಾನ ಲಕ್ಷ್ಮಣಝಾಲ ನದಿಯಿಂದ 2 ಕಿಮೀ ದೂರದಲ್ಲಿದ್ದು ಸಮುದ್ರಮಟ್ಟದಿಂದ ಸು.1676 ಮೀ. ಎತ್ತರದಲ್ಲಿದೆ. ಈ ದೇವಾಲಯದ ಬಳಿ ನಿಂತು ಸುತ್ತಲ ಸುಂದರ ಪ್ರದೇಶಗಳನ್ನು ನೋಡಿ ಆನಂದಿಸಬಹುದು. ಸುರಾಸುರರು ಅಮೃತವನ್ನು ತೆಗೆಯಲು ಸಮುದ್ರ ಮಂಥನ ಮಾಡುತ್ತಿದ್ದಾಗ ಬಂದ ವಿಷವನ್ನು ಈ ಸ್ಥಳದಲ್ಲಿ ಶಿವ ಕುಡಿದನೆಂದೂ ಆಗ ಶಿವನ ಕಂಠ ನೀಲವರ್ಣವಾದ್ದರಿಂದ ಈ ಸ್ಥಳಕ್ಕೆ ನೀಲಕಂಠ ಎಂದು ಕರೆಯಲಾಯಿತೆಂದೂ ಕಥೆ. ಈ ದೇವಾಲಯ ಪರ್ವತದ ತುದಿಯಲ್ಲಿರುವುದರಿಂದ ಯಾತ್ರಾರ್ಥಿಗಳು ಕಾಲ್ನಡಿಗೆಯಲ್ಲಿ 10 ಕಿಮೀ ವಾಹನಗಳಲ್ಲಿ 32 ಕಿಮೀ ದೂರಕ್ರಮಿಸಬೇಕಾಗುವುದು. 

	ಇಲ್ಲಿನ 12ನೆಯ ಶತಮಾನದಲ್ಲಿ ಶಂಕರಾಚಾರ್ಯರು ಭರತ  ಮಂದಿರವನ್ನು ನಿರ್ಮಿಸಿದರು. ಇದು ಗಂಗಾನದಿ ದಂಡೆಯ ಮೇಲಿನ ಹೃಷಿಕೇಶ್‍ನ ಹಳೆಯ ಪಟ್ಟಣ ಭಾಗದಲ್ಲಿದೆ. ದೇವಾಲಯದ ಒಳಗೆ ಒಂದೇ ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲ್ಪಟ್ಟ ಮಹಾವಿಷ್ಣುವಿನ ವಿಗ್ರಹವೂ ಶಂಕರಾಚಾಯರು ರೂಪಿಸಿದ ಶ್ರೀ ಯಂತ್ರವೂ ಇದೆ. ಇಲ್ಲಿನ ಮೂಲ ದೇವಾಲಯಗಳನ್ನ 1398ರಲ್ಲಿ ತೈಮೂರ್ ಭಗ್ನಗೊಳಿಸಿದ ನೆನ್ನುವರು. ಇಲ್ಲಿ ಪುರಾತನ ನಾಣ್ಯಗಳು, ಕುಡಿಕೆಗಳು ಮತ್ತು ಚರಿತ್ರಾರ್ಹ ವಸ್ತುಗಳು ಇತ್ತೀಚಿನ ಸಂಶೋಧನೆಯಿಂದ ಬೆಳಕಿಗೆ ಬಂದಿವೆ. ಇಲ್ಲಿ ಪ್ರತಿವರ್ಷ ವಸಂತ ಕಾಲದಲ್ಲಿ ವಸಂತ ಪಂಚಮಿ ಆಚರಿಸಲಾಗುತ್ತದೆ. 

	ಪಾರಮಾರ್ಥ ನಿಕೇತನ ಹಿಂದುಗಳ ಪವಿತ್ರ ದೇವಾಲಯಗಳಲ್ಲಿ ಒಂದು. ಇಲ್ಲಿ ಒಂದು ಆಶ್ರಮವಿದೆ. ಪಾರಮಾರ್ಥ ಘಟ್ಟದ ಮೇಲೆ ಪ್ರತಿದಿನ ಸಾಯಂಕಾಲ ಗಂಗಾ ಅರತಿ ಮತ್ತು ಹವನ ಕಾರ್ಯಗಳು ನಡೆಯುತ್ತವೆ. ಇಲ್ಲಿನ ಸೂರ್ಯಾಸ್ತ ಅತ್ಯಂತ ರಮಣೀಯ. ಈ ಪ್ರದೇಶದ ಅರಣ್ಯದಲ್ಲಿ ಮಹೇಶ್ ಯೋಗಿಯವರ ಗೀತಾ ಭವನವಿದೆ. 

	ರಘುನಾಥ ಮಂದಿರ ಮತ್ತು ತ್ರಿವೇಣಿ ಘಟ್ಟ ಹೃಷಿಕೇಶದ ಬಳಿಯ ಸಮಾರಂಭಗಳ ಕೇಂದ್ರ. ತ್ರಿವೇಣಿ ಘಟ್ಟದಲ್ಲಿ ಸಂಜೆ ಮಾಡುವ ಗಂಗಾ ಆರತಿ ವಿಶೇಷವಾಗಿರುತ್ತದೆ. 

	ಚಂದ್ರ ಭಾಗ ನದಿ ಗಂಗಾನದಿ ಸೇರುವಲ್ಲಿ ಪುರಾತನ ಶಿಲ್ಪಕಲಾಕೃತಿಗೆ ಹೆಸರಾಗಿರುವ ಚಂದ್ರೇಶ್ವರ ಮತ್ತು ಸೋಮೇಶ್ವರ ದೇವಾಲಯ ಹರಿದ್ವಾರಕ್ಕೆ ಹೋಗುವ ಮಾರ್ಗದಲ್ಲಿದೆ. 

	ಕೆಳ ಹಿಮಾಲಯದ ಶಿವಾಲಿಕ್ ಶ್ರೇಣಿಯಲ್ಲಿರುವ ಕುಂಜಾಪುರಿ ದೇವಾಲಯ ಹಿಮಾಲಯದ 13 ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿಂದ ಮಹಾ ಹಿಮಾಲಯದ ಸ್ವರ್ಗ ರೋಹಿಣಿ (6252 ಮೀ), ಗಿರಿಶಿಖರಗಳನ್ನು ನೋಡಬಹುದಾಗಿದೆ. 

	ಹೃಷಿಕೇಶದಿಂದ ಕಾಲ್ನಡಿಗೆಯಲ್ಲಿ ಒಂದು ಗಂಟೆ ಪ್ರಯಾಣ ಮಾಡಿದರೆ ವಸಿಷ್ಠ ಗುಹೆ ಸಿಗುತ್ತದೆ. ಇಲ್ಲಿ ವಸಿಷ್ಠ ಮಹರ್ಷಿ ತಪಸ್ಸು ಮಾಡಿದನೆಂದು ಪ್ರತೀತಿ. ಇದು ಧ್ಯಾನಕ್ಕೆ ಸೂಕ್ತ ಸ್ಥಳವಾಗಿದೆ. ಹೃಷಿಕೇಶವು ಹರಿದ್ವಾರ ಮಾರ್ಗವಾಗಿ ದೆಹಲಿ, ಹೌರಾ, ಮುಂಬಯಿ, ಲಕ್ಕೆಣ್ನ, ವಾರಾಣಸಿ ಮತ್ತು ಡೆಹ್ರಾಡೂನ್ ನಗರಗಳಿಂದ ರೈಲು ಸಂಪರ್ಕವನ್ನೊಂದಿದೆ.	
	
(ಕೆ.ಎಲ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ